ತುಳಸಿ ಗಿಡ  -
ತುಂಬೆ, ಕಾಮಕಸ್ತೂರಿ, ಪಚ್ಚಿತೆನೆ ಇವುಗಳ ಗುಂಪಾದ ಲ್ಯಾಮಿಯೇಸೀ ಕುಟುಂಬಕ್ಕೆ ಸೇರಿದ ಒಂದು ಗಿಡಮೂಲಿಕೆ ಸಸ್ಯ. (ಸೇಕ್ರೆಡ್ ಬೇಸಿಲ್). ಇದರಲ್ಲಿ ಹಲವಾರು ಬಗೆಗೆಳಿವೆ. ಉದಾಹರಣೆಗೆ ರಮತುಳಸಿ, ಕೃಷ್ಣತುಳಸಿ, ಶ್ರೀತುಳಸಿ ಮುಂತಾದವು. ಇವೆಲ್ಲವೂ ವೈe್ಞÁನಿಕವಾಗಿ ಒಂದೆ ಪ್ರಭೇದಕ್ಕೆ ಸೇರಿದವು. ಶಾಸ್ತ್ರೀಯ ನಾಮ ಆಸಿಮಮ್ ಸ್ಯಾಂಕ್ಟಮ್. ಆದರೆ ಇವುಗಳ ಕಾಂಡ ಹಾಗೂ ಎಲೆಗಳ ಬಣ್ಣದಲ್ಲಿ ವ್ಯತ್ಯಾಸ ಇರುವ್ಯದರಿಂದ ಇವು ಬೇರೆ ಬೇರೆ ಎಂದು ಪರಿಗಣಿಸಲು ಅವಕಾಶವಾಗಿದೆ. ಶ್ರೀತುಳಸಿಯ ಎಲೆಯ ಬಣ್ಣ ತಿಳಿ ಹಸಿರಾದರೆ, ಕೃಷ್ಣತುಳಸಿಯ ಎಲೆ ನೀಲಿಗೆಂಪು ಬಣ್ಣದ್ದು. ಭಾರತಾದ್ಯಂತ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತುಳಸಿ ಪ್ರಭೇದಗಳು ಕಾಣಸಿಗುತ್ತವೆ.
ಇದು ಸಾಮಾನ್ಯವಾಗಿ ವಾರ್ಷಿಕ ಮೂಲಿಕೆ ಸಸ್ಯ. ಆದರೂ ಪೊದರು ರೂಪದ ಸಸ್ಯವಾಗಿ ಬೆಳೆಯುವುದು. ಗಿಡದ ಎತ್ತರ 50-150 ಸೆಂ. ಮೀ. ಇರುವುದುಂಟು. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ಅಗಲ ಸುಮಾರು 1 ಸೆಂ. ಮೀ. ಉದ್ದ 1.5-2 ಸೆಂ. ಮೀ ಹೂಗೊಂಚಲು ಕಾಂಡದ ಅಗ್ರಭಾಗದಲ್ಲಿ ಮೂಡುತ್ತದೆ. ಗೊಂಚಲಿನಲ್ಲಿ ಮುಖ್ಯಕಾಂಡ ಮಾದರಿಯಲ್ಲಿ (ರೇಸಿಮೋಸ್) ಬೆಳೆಯುತ್ತದಾದರೆ ಇದರಪಕ್ಕಗಳಲ್ಲಿ ತಲಾ ಮೂರು ಹೂಗಳುಳ್ಳ ಮಧ್ಯಾರಂಭಿ ಕವಲುಗಳು (ಸೈಮೋಸ್) ಮೂಡುತ್ತ ಹೋಗುವುವು. ಇಂಥ ಗೊಂಚಲಿಗೆ ತರ್ಸಸ್ ಅಥವಾ ತರ್ಸ್ ಎಂದು ಹೆಸರು. ಹೂಗಳು ಸಣ್ಣಗಾತ್ರದವು. ದಳ ಸಮೂಹ ಇರ್ತುಟಿಯಾಕಾರದ್ದು. ಕೇಸರಗಳ ಸಂಖ್ಯೆ 4 ; ಇವುಗಳ ಪೈಕಿ ಎರಡು ಕೇಸರಗಳು ಮಿಕ್ಕೆರಡಕ್ಕಿಂತ ಉದ್ದವಾಗಿವೆ.

ತುಳಸೀ ಗಿಡ ಒಳ್ಳೆಯ ಔಷಧಿಯೆಂದು ಹೆಸರಾಗಿದೆ. ನೆಗಡಿ ಶೀತಕ್ಕೆ ಇದರ ರಸ ಒಳ್ಳೆಯ ಮದ್ದು. ಶ್ವಾಸಕೋಶ ಭಾಧೆಗಳಲ್ಲಿ ಚರ್ಮರೋಗಗಳಲ್ಲಿ ಇದರ ರಸವನ್ನು ಉಪಯೋಗಿಸುವುದುಂಟು. ತುಳಸಿಯ ಎಲೆಗಳಲ್ಲಿರುವ ರಸ ಗಾಳಿಯಲ್ಲಿ ವ್ಯಾಪಿಸಿ ಸೊಳ್ಳೆಗಳನ್ನು ದೂರವಿರಿಸುತ್ತದೆ. ಇದರ ಎಲೆಗಳನ್ನು ಆವಿ ಆಸವೀಕರಣಕ್ಕೆ ಒಳಪಡಿಸಿ ಎಣ್ಣೆಯನ್ನು ಪಡೆಯುವುದುಂಟು. ಇದಕ್ಕೆ ಕೀಟನಾಶಕ ಮತ್ತು ಕ್ರಿಮಿನಾಶಕ ಗುಣ ಉಂಟು. ಎಲೆಗಳನ್ನು ನೀರಿನಲ್ಲಿ ನೆನೆಸಿ, ಆ ನೀರನ್ನು ಮಕ್ಕಳ ಜಠರ ಹಾಗೂ ಯಕೃತ್ತು ಭಾಧೆಗಳಲ್ಲಿ ಕೊಡುವ ಪದ್ಧತಿ ಉಂಟು. ಒಣಗಿದ ಎಲೆಗಳನ್ನು ಪುಡಿಮಾಡಿ ವ್ರಣಗಳಿಗೆ ಹಾಕಿದರೆ ಹುಳುಗಳಿದ್ದರೂ ಸಾಯುವುವು ಎಂದು ಹೇಳಲಾಗಿದೆ. ಬೇರಿನ ಕಷಾಯವನ್ನು ಚಳಿ ಜ್ವರದಲ್ಲಿ ಸ್ವೇದಕಾರಿಯಾಗಿ ಉಪಯೋಗಿಸುವರು. ಕಿವಿನೋವಿಗೆ ತುಳಸಿ ಎಲೆಯ ರಸ ಸಿದ್ಧೌಷಧ. ಜೇನುತುಪ್ಪ, ಶುಂಠಿ, ಮತ್ತು ಈರಳ್ಳಿ ರಸದಲ್ಲಿ ತುಳಸಿ ಹೂವನ್ನು ಸೇರಿಸಿ ತಿಂದರೆ ಕಫ ಹೊರಬರುತ್ತದೆ. 

ಬೀಜಗಳಲ್ಲಿರುವ ಲೋಳೆಯಂತಹ ವಸ್ತು ಶಾಮಕಗುಣವುಳ್ಳದ್ದು. ಉಚ್ಚೆ ಹೊಯ್ಯುವಾಗ ಅಡ್ಡಿಯಾದರೆ ಇದನ್ನು ಉಪಯೋಗಿಸುವರು. ಬೀಜಗಳು ವೀರ್ಯವೃದ್ದಿಕಾರಕಗಳು. ಹಳೆಯ ಬೆಲ್ಲದ ಜೊತೆ ಬೀಜದ ಪುಡಿಯನ್ನು ಸೇವಿಸುವುದುಂಟು.
(ಎಚ್.ಎನ್.ಸಿ.)

ಐತಿಹ್ಯ : ತುಳಸಿ ಭಾರತೀಯರಿಗೆ ಹಿಂದಿನಿಂದಲೂ ಬಹು ಪವಿತ್ರವೆನಿಸಿದ ಗಿಡ. ಅದರ ಬಗೆಗಿನ ಐತಿಹ್ಯ ಹೀಗಿದೆ : ದೂರ್ವಾಸ ಮಹರ್ಷಿಯ ಶಾಪದಿಂದ ತನ್ನ ಪದವಿಯನ್ನು ಕಳೆದುಕೊಂಡ ಇಂದ್ರ ತನ್ನ ಅನುಚರರೊಡನೆ ಹಾಲಿನ ಸಮುದ್ರವನ್ನು ಕಡೆದಾಗ ಮೊದಲು ಐರಾವತ ಮೊದಲಾದ 14 ರತ್ನಗಳು ಉದ್ಭವಿಸುತ್ತವೆ. ಬಳಿಕ ಅಮೃತದ ಕಲಶ ಕಾಣಿಸಿ ಕೊಳ್ಳುತ್ತವೆ. ವಿಷ್ಣು ಅದನ್ನು ಕೈಯಲ್ಲಿ ಧರಿಸುತ್ತಾನೆ. ಆಗ ಆತನ ಕಣ್ಣುಗಳಿಂದ ಸುರಿದ ಆನಂದ ಬಾಷ್ಪಗಳು ಆ ಅಮೃತ ಕಲಶದೊಳಕ್ಕೆ ಬಿದ್ದು ಅಲ್ಲಿ ಒಂದು ಸಣ್ಣ ಗಿಡ ಹುಟ್ಟುತ್ತದೆ. ತುಲನೆ (ಹೋಲಿಕೆ) ಇಲ್ಲದುದರಿಂದ ಅದಕ್ಕೆ ತುಳಸೀ ಎಂಬ ಹೆಸರು ಬಂತು. ತುಳಸಿ ಎಂಬುದು ತುಲಸೀ ಎಂಬುದರ ತದ್ಭವರೂಪ.

ಶ್ರೀ ತುಲಸೀ ಕ್ಷುದ್ರಪತ್ರ ತುಲಸೀ ರಕ್ತತುಲಸೀ ಬಿಲ್ವಗಂಧ ತುಲಸೀ ಕೃಷ್ಣತುಲಸೀ ವರ್ವರಿ ತುಲಸೀ ಎಂಬು ತುಲಸಿಯಲ್ಲಿ ಆರು ಬಗೆ. ಪೂಜಾದಿಗಳಲ್ಲಿ ಶ್ರೀ ತುಲಸೀ ಮತ್ತು ಕೃಷ್ಣತುಲಸೀ ಮುಖ್ಯವಾದ್ದು. ಚೇವತಾರ್ಚನೆಗೆ ತುಲಸಿ ತೀರ ಪ್ರಮುಖವಾದದ್ದು. ಗಣಪತಿಯನ್ನು ಬಿಟ್ಟು ಉಳಿದ ದೇವತಾರ್ಚನೆಗೆ ತುಲಸಿಯನ್ನು ಉಪಯೋಗಿಸುತ್ತಾರೆ. ದೇವತಾ ಪೂಜೆ ಆದ ಬಳಿಕ ತೀರ್ಥ ಸ್ವೀಕಾರ ಮಾಡಿದ ಮೇಲೆ ಅರ್ಚನೆಗೆ ಉಪಯೋಗಿಸಿದ ತುಲಸೀ ದಳವನ್ನು ದೇವತಾ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಆ ದಳಗಳನ್ನು ಆಘ್ರಾಣಿಸಿ ಕಿವಿಯಲ್ಲಿ ಧರಿಸುವುದೂ ರೂಢಿಯಲ್ಲಿದೆ. ಶ್ರಾದ್ಧಕಾಲದಲ್ಲಿ ದಾನಕಾಲದಲ್ಲಿ ತುಲಸೀದಳ ಆತ್ಯಾವಶ್ಯಕ. ಮೃತಕಳೇಬರದ ಮೇಲೆ ತುಲಸೀಕಾಷ್ಠವನ್ನು ಇಟ್ಟು ಸುಡುತ್ತಾರೆ. ಇದರಿಂದ ಮೃತನ ಆತ್ಮಕ್ಕೆ ಸದ್ಗತಿ ದೊರೆಯುತ್ತದೆ ಎಂದು ನಂಬಿಕೆ. ಸುಮಂಗಲಿಯರು ನಿತ್ಯ ಸ್ನಾನಾನಂತರ ತುಲಸಿ ಗಿಡವನ್ನು ಪೂಜಿಸುವುದು ಇಂದಿಗೂ ರೂಢಿಯಲ್ಲಿದೆ. ಮನೆಗಳಲ್ಲಿ ತುಲಸೀ ಗಿಡಗಳನ್ನು ಬೃಂದಾವನದಲ್ಲಿಟ್ಟು ಪೂಜಿಸುತ್ತಾರೆ. ಹಿಂದೂ ಸಂಪ್ರದಾಯದಂತೆ ತುಲಸೀ ಬೃಂದಾವನವಿಲ್ಲದ ಮನೆಯಿಲ್ಲ. ಹುಣ್ಣಿಮೆ ಅಮಾವಾಸ್ಯೆ ದ್ವಾದಶೀ ಸಂಕ್ರಮಣ ದಿವಸಗಳಲ್ಲಿ ಮಂಗಳ ಶುಕ್ರವಾರಗಳಲ್ಲಿ ಸಂಧ್ಯಾಕಾಲ ಮಧ್ಯಾಹ್ನ ರಾತ್ರಿ ಅಶೌಚ ಕಾಲಗಳಲ್ಲಿ ಸ್ನಾನಮಾಡದೆ ಮೈಲಿಗೆಯಲ್ಲಿ ಗಿಡದಿಂದ ಪೂಜೆಗಾಗಿ ತುಲಸೀದಳಗಳನ್ನು ಕೀಳಬಾರದು. ಕೊಯ್ಯುವಾಗಲೂ ಕೇಶವಪ್ರಿಯಳೂ ಅಮೃತಜನ್ಮಳೂ ಆದ ನಿನ್ನನ್ನು ಕೇಶವನಿಗಾಗಿ ಕೊಯ್ಯುತ್ತೇನೆ. ನೀನು ವರಪ್ರದಳಾಗು ಎಂದು ಧ್ಯಾನಿಸಬೇಕು. ಎಲ್ಲ ದೇವತೆಯರೂ ದೆವಪತ್ನಿಯರೂ ತುಲಸಿಯಲ್ಲಿ ನೆಲೆಸಿದ್ದಾರೆ. ತುಲಸೀಪತ್ರದ ಮಧ್ಯದಲ್ಲಿ ಕೇಶವನೂ ಅಗ್ರದಲ್ಲಿ ಬ್ರಹ್ಮನೂ ಮೂಲದಲ್ಲಿ ಶಿವನೂ ನೆಲಸಿರುವರು. ಕಾರ್ತಿಕಮಾಸ ಶುಕ್ಲಪಕ್ಷದ ದ್ವಾದಶೀ (ಉತ್ತಾನದ್ವಾದಶೀ) ದಿವಸ ಬೃಂದಾವನದಲ್ಲಿ ತುಲಸಿಯೊಡನೆ ಧಾತ್ರೀ (ನೆಲ್ಲೀ) ಗಿಡವನ್ನು ನೆಟ್ಟು ವಿಶೇಷ ಪೂಜೆಯನ್ನು ಮಾಡುತ್ತಾರೆ. ಕಾರ್ತಿಕ ಪೂರ್ಣಿಮಾ ದಿವಸ ತುಲಸಿಯ ಜನ್ಮದಿನ. ತುಲಸೀ ಗಿಡ ಇರುವೆಡೆಗೆ ಯಮಕಿಂಕರರ ಪ್ರವೇಶವಿಲ್ಲ ಎಂಬ ನಂಬಿಕೆ ಇದೆ. ತುಲಸಿಯ ಸನ್ನಿಧಿಯಲ್ಲಿ ಶ್ರಾದ್ಧ ಮಾಡಿದರೆ ಪಿತೃಗಳು ತೃಪ್ತರಾಗುತ್ತಾರೆ. ತುಲಸೀಪತ್ರದಿಂದ ವಿಷ್ಣುವನ್ನು ಪೂಜಿಸಿದರೆ ಜನ್ಮಾಂತರಾರ್ಜಿತ ಪಾಪಗಳೂ ನೀಗುತ್ತವೆ. ಕಾರ್ತಿಕಮಾಸದಲ್ಲಿ ತುಲಸೀಗಿಡದ ಹತ್ತಿರ ದೀಪಹಚ್ಚಿ ಇಡುವವರಿಗೆ ಮರಣಾನಂತರ ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ ಎಂದು ನಂಬಿಕೆ. ವೈಷ್ಣವರು ತುಲಸೀ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸುತ್ತಾರೆ. ತುಲಸೀ ಕಾಷ್ಠದಿಂದ ಮಣಿಗಳನ್ನು ರಚಿಸಿ ಸರವನ್ನು ಸದಾ ಧರಿಸುತ್ತಾರಲ್ಲದೇ ಜಪಾದಿಗಳಲ್ಲಿ ಅದನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.
ಪುರಾಣಗಳಲ್ಲಿ ತುಲಸಿಗೆ ಸಂಬಂಧಪಟ್ಟ ಅನೇಕ ಕಥೆಗಳಿವೆ.

1. ತುಲಸೀ ಎಂಬುವಳು ಗೋಲೋಕದ ಗೋಪಿಕೆಯರಲ್ಲಿ ಒಬ್ಬಳು. ಕೃಷ್ಣನಿಗೆ ಅತ್ಯಂತ ಪ್ರಿಯಳಾಗಿದ್ದವಳು. ಒಮ್ಮೆ ಕೃಷ್ಣನೊಡನೆ ಕ್ರೀಡಿಸುತ್ತಿದ್ದ ಆಕೆಯನ್ನು ಕಂಡ ರಾಧೆ ಕುಪಿತಳಾಗಿ ಮನುಷ್ಯಳಾಗಿ ಹುಟ್ಟುವಂತೆ ಶಾಪ ಕೊಟ್ಟಳು. ನೀನು ಭರತಖಂಡದಲ್ಲಿ ಜನಿಸಿ ತಪಸ್ಸುಮಾಡಿ ನನ್ನ ಅಂಶದಿಂದ ಕೂಡಿದ ಪುರುಷನನ್ನು ಹೊಂದುತ್ತೀಯೆ ಎಂದು ನಾರಾಯಣ ಆಕೆಗೆ ಅನುಗ್ರಹಿಸಿದ. ಅದರಂತೆ ಆಕೆ ಭೂಲೋಕದಲ್ಲಿ ಹಮಸಧ್ವಜನ ಮಗನಾದ ಧರ್ಮಧ್ವಜನೆಂದ ರಾಜನ ಹೆಂಡತಿ ಮಾಧವಿಯ ಗರ್ಭದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯ ದಿವಸ ಹುಟ್ಟಿದಳು. ಅಸದೃಶಳಾದ ಆಕೆಗೆ ತುಲಸೀ ಎಂದೇ ನಾಮಕರಣ ಮಾಡಿದರು. ಬಾಲ್ಯದಲ್ಲೇ ತುಲಸಿ ತಪಸ್ಸು ಮಾಡಲು ಕಾಡಿಗೆ ಹೋದಳು.

ಹೀಗೆಯೇ ಗೋಲೋಕದ ತುಲಸಿಯನ್ನು ಮೋಹಿಸಿದ ಸುದಾಮನೆಂಬ ಗೋಪಾಲನಿಗೂ ಭೂಲೋಕದಲ್ಲಿ ಹುಟ್ಟುವಂತೆ ರಾಧೆ ಶಾಪ ಕೊಟ್ಟಿರುತ್ತಾಳೆ. ಆತ ದಂಭಾಸುರನೆಂಬ ದಾನವನಿಗೆ ಶಂಖಚೂಡನೆಂಬ ಹೆಸರಿನಿಂದ ಮಗನಾಗಿ ಹುಟ್ಟಿ ಕಾಲಕ್ರಮದಲ್ಲಿ ಯಾರಿಂದಲೂ ವಧ್ಯನಾಗದಂತೆ ಬ್ರಹ್ಮನಿಂದ ವರವನ್ನು ಪಡೆದ. ಆದರೆ ಆತನ ಪತ್ನಿಯ ಪಾತಿವ್ರತ್ಯಕ್ಕೆ ಭಂಗಬಂದಾಗ ಮೃತ್ಯು ಖಂಡಿತ ಎಂದು ಆತನಿಗೆ ಬ್ರಹ್ಮ ತಿಳಿಸಿದ. ಶಂಖಚೂಡ ಬ್ರಹ್ಮನ ಆದೇಶದಂತೆ ತುಲಸಿಯನ್ನು ಗಾಂಧರ್ವ ಪದ್ಧತಿಯಂತೆ ವಿವಾಹವಾದ. ಬಲಮತ್ತನಾದ ಆ ಅಸುರ ದೇವತೆಗಳಾ ಅಧಿಕಾರವನ್ನು ಅಪಹರಿಸಲಾಗಿ ಅದರಿಂದ ತೊಂದರೆಗೊಳಗಾದ ಇಂದ್ರನೇ ಮೊದಲಾದ ದೇವತೆಗಳು ಬ್ರಹ್ಮನೊಡನೆ ವೈಕುಂಠಕ್ಕೆ ತೆರಳಿ ನಾರಾಯಣನಿಗೆ ತಮ್ಮ ಸ್ಥಿತಿಯನ್ನು ನಿವೇದಿಸಿದರು. ಆಗ ನಾರಾಯಣ ದೇವತೆಗಳಿಗೆ ಅಭಯಪ್ರದಾನಮಾಡಿ ತನ್ನ ಶೂಲವನ್ನು ಶಿವನಿಗಿತ್ತು ಶಂಖ ಚೂಡನೊಡನೆ ಯುದ್ಧಮಾಡಲು ಹೇಳಿ ತಾನು ಆತನ ಪತ್ನಿಯ ಪಾತಿವ್ರತ್ಯವನ್ನು ಭಂಗಪಡಿಸಿ ತನ್ಮೂಲಕ ಆ ದಾನವನನ್ನು ಸೋಲಿಸುವುದಾಗಿ ತಿಳಿಸಿದ. ಅದರಂತೆ ಶಿವ ಶಂಖಚೂಡನೊಡನೆ ಯುದ್ಧಮಾಡಿದ. ನಾರಾಯಣ ವಿಪ್ರವೇಷದಿಂದ ಶಂಖಚೂಡನಲ್ಲಿಗೆ ಬಂದು ಆತನಿಗೆ ರಕ್ಷಣೆಯಾಗಿದ್ದ ಕೃಷ್ಣಕವಚವನ್ನು ದಾನವಾಗಿ ಪಡೆದು ಬಳಿಕ ಶಂಖಚೂಡನ ರೂಪವನ್ನೇ ಧರಿಸಿ ತುಲಸಿಯ ಸಮೀಪಕ್ಕೆ ಹೋಗಿ ತಾನು ಯುದ್ಧದಲ್ಲಿ ಶಿವನನ್ನು ಗೆದ್ದುಬಂದೆನೆಂದು ಹೇಳಿ ಆಕೆಗೆ ತಿಳಿಸಿ ಕಪಟವೇಷದಿಂದ ಆಕೆಯೊಡನೆ ರಮಿಸಿದ. ಶಂಖಚೂಡನು ಯುದ್ದದಲ್ಲಿ ಶಿವನಿಂದ ಸತ್ತ. ಸುರತಭೇದದಿಂದ ಎಚ್ಚೆತ್ತ ತುಲಸಿಗೆ ತನ್ನೊಡನೆ ರಮಿಸುತ್ತಿರುವ ತನ್ನ ಪತಿಯಾದ ಶಂಖಚೂಡನಲ್ಲನೆಂಬ ಸಂಶಯ ಮೂಡಿತು. ಇದನ್ನರಿತ ನಾರಾಯಣ ತನ್ನ ನಿಜರೂಪವನ್ನು ಆಕೆಗೆ ತೋರಿದ. ಆಗ ತುಲಸಿ ನಾರಾಯಣನನ್ನು ಕಲ್ಲಾಗುವಂತೆ ಶಪಿಸಿದಳು. ಬಳಿಕ ನಾರಾಯಣನ ಕಾಲಿಗೆರಗಿ ಅತ್ತಳು. ಆಗ ನಾರಾಯಣ, ತುಲಸಿ ನಿನ್ನ ಈ ಶರೀರವನ್ನು ಬಿಟ್ಟು ರಮಸದೃಶಳಾಗು. ನನ್ನೊಡನೆ ಕ್ರೀಡಿಸು, ನಿನ್ನ ಈ ಶರೀರ ಗಂಡಕೀ ನದಿಯಾಗಿ ಪ್ರವಹಿಸಲಿ. ನಿನ್ನ ಕೇಶಸಮೂಹ ತುಲಸೀ ಎಂಬ ಪುಣ್ಯನಾಮದಿಂದ ಕೂಡಿದ ಗಿಡವಾಗಲಿ. ನಾನು ಈ ನದಿಯಲ್ಲಿ ಕಲ್ಲುರೂಪದಲ್ಲಿ ಸಾಲಿಗ್ರಾಮ ಶಿಲೆಯಾಗಿರುತ್ತೇನೆ. ತುಲಸೀದಳದಿಂದ ಸಾಲಿಗ್ರಾಮ ಶಿಲೆಯನ್ನು ಪೂಜಿಸುವ ನನ್ನ ಭಕ್ತರು ವಿಷ್ಣುಲೋಕವನ್ನು ಪಡೆಯುತ್ತಾರೆ- ಎಂದು ತಿಳಿಸಿದ. ಅದರಂತೆ ಸಾಲಿಗ್ರಾಮವನ್ನು ಇಂದಿಗೂ ತುಲಸೀದಳದಿಂದ ಪೂಜಿಸುವುದು, ಬಳಿಯಲ್ಲಿ ಶಂಖಚೂಡನ ಪ್ರತಿಕೃತಿಯಾದ ಶಂಖವನ್ನು ಇಟ್ಟು ಪೂಜಿಸುವುದು ರೂಢಿಯಲ್ಲಿದೆ.

2. ಪದ್ಮಪುರಾಣದಂತೆ ಜಲಂಧರನ ಪತ್ನಿ ವೃಂದೆಯ ಲಾವಣ್ಯಕ್ಕೆ ವಿಷ್ಣು ಮುಗ್ಧನಾಗುತ್ತಾನೆ. ಆಗ ಇತರ ದೇವತೆಗಳು ವಿಷ್ಣುವಿನ ಮೋಹವನ್ನು ನಿವೃತಿಗೊಳಿಸುವಂತೆ ಮಹಾದೇವನನ್ನು ಪ್ರಾರ್ಥಿಸುತ್ತಾರೆ. ಮಾಯೆಯನ್ನು ಆರಾಧಿಸುವಂತೆ ಶಿವ ಅವರಿಗೆ ತಿಳಿಸುತ್ತಾನೆ. ಅದರಂತೆ ದೇವತೆಗಳು ಮಾಯೆಯನ್ನು ಅರಾಧಿಸಲು ಆಕೆ ಸಂತುಷ್ಟಳಾಗಿ `ನಾನು ರಜಸ್ಸತ್ತ್ವತಮೋಗುಣಗಳುಳ್ಳವಳಾಗಿ ಕ್ರಮವಾಗಿ ಗೌರೀ ಲಕ್ಷ್ಮೀ ಸ್ವಾಧಾ ರೂಪದಲ್ಲಿ ಇರುತ್ತೇನೆ. ಅವರು ನಿಮ್ಮ ಕಾರ್ಯವನ್ನು ನೆರವೇರಿಸುತ್ತಾರೆ.' ಎಂದು ತಿಳಿಸುತ್ತಾಳೆ. ಅಳಿಕ ಆ ದೇವತೆಗಳು ಆ ಮೂವರನ್ನೂ ಸಮೀಪಿಸಿ ಪ್ರಾರ್ಥಿಸುತ್ತಾರೆ. ಆ ಮೂವರೂ ಮೂರು ವಿಧ ಬೀಜಗಳನ್ನು ಕೊಟ್ಟು ವಿಷ್ಣುವಿನ ಎಡೆಯಲ್ಲಿ ಅದನ್ನು ನೆಡುವಂತೆ ತಿಳಿಸುತ್ತಾರೆ. ದೇವತೆಗಳು ಆ ಬೀಜಗಳನ್ನು ಆ ಮೂವರ ಆದೇಶದಂತೆ ವಿಷ್ಣುವಿನ ಸಮೀಪದಲ್ಲಿ ನೆಡುತ್ತಾರೆ. ಅವುಗಳಿಂದ ಧಾತ್ರೀ ಮಾಲತೀ ತುಲಸೀ ಎಂಬ ಮೂರು ಗಿಡಗಳು ಹುಟ್ಟುತ್ತವೆ. ಸ್ವಧಾಂಶದಿಂದ ಹುಟ್ಟಿದುದು ಧಾತ್ರೀ, ಲಕ್ಷ್ಮ್ಯಂಶದಿಂದ ಹುಟ್ಟಿದುದು ಮಾಲತೀ, ಗೌರ್ಯಂಶದಿಂದ ಹುಟ್ಟಿದುದು ತುಲಸೀ. ವಿಷ್ಣು ಧಾತ್ರೀ ತುಲಸಿಯರನ್ನು ನೋಡಿದೊಡನೆಯೇ ಆತನಲ್ಲಿ ಮೂಡಿದ್ದ ಮೋಹ ಹೋಗಿ ತನ್ನ ನಿಜಸ್ಥಿತಿಗೆ ಬರುತ್ತಾನೆ. ಬಳಿಕ ಅವರೊಡನೆ ಗೂಡಿ ತನ್ನ ಸ್ವಸ್ಥಾನಕ್ಕೆ ತೆರಳುತ್ತಾನೆ.

ಶ್ಯಾಮವರ್ಣಳೂ ಕಮಲಲೋಚನಳೂ ಪ್ರಸನ್ನಳೂ ಪದ್ಮಕಲ್ಹಾರವರದ ಆಭಯ ಹಸ್ತಗಳಿಂದ ಕೂಡಿ ಚತುರ್ಭುಜಳೂ ಕಿರೀಟ ಹಾರ ಕೇಯೂರ ಕುಂಡಲ ಮೊದಲಾದವುಗಳಿಂದ ಅಲಂಕೃತಳೂ ಬಿಳಿಯ ವಸ್ತ್ರವನ್ನುಟ್ಟು ಪದ್ಮಾಸನಸ್ಥಳೂ ಆಗಿರುವಂತೆ ತುಲಸಿಯನ್ನು ಧ್ಯಾನಿಸಬೇಕು.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ